​​​​​​​                                                                                                                  ಕುಲಪತಿಗಳ ಸಂದೇಶ​


​ನಿಜವಾದ ಶಿಕ್ಷಣವು ಮಾನವನ ಘನತೆಯನ್ನು ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.  ಪ್ರತಿಯೊಬ್ಬರೂ ಶಿಕ್ಷಣವನ್ನು ನಿಜವಾದ ಅರ್ಥದಲ್ಲಿ ಅರ್ಥೈಸಿಕೊಂಡು ಮಾನವೀಯ ಚಟುವಟಿಕೆಗಳಲ್ಲಿ ಅನುಷ್ಠಾನಗೊಳಿಸಿದ ಪಕ್ಷದಲ್ಲಿ ಪ್ರಪಂಚವು ವಾಸಿಸಲು ಅತ್ಯುತ್ತಮ ಸ್ಥಳವಾಗುತ್ತದೆ.  


                                                                                                                                                                                                    ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್
                                                                                                                                                                                                         ಗೌರವಾನ್ವಿತ ಹಿಂದಿನ ರಾಷ್ಟ್ರಪತಿಗಳು​

ತಮ್ಮನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಕ್ಕೆ ಸ್ವಾಗತಿಸಲು ಹರ್ಷವೆನಿಸುತ್ತದೆ. ಈ ವಿಶ್ವವಿದ್ಯಾನಿಲಯವು 1996ರಲ್ಲಿ "ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ" ಎಂಬ ದೂರದರ್ಶಿತ್ವದೊಂದಿಗೆ ರಾಜ್ಯ ಶಾಸನ ಸಭೆಯ ಅಧಿನಿಯಮದಿಂದ ಸ್ಥಾಪಿಸಲ್ಪಟ್ಟಿದೆ. ಈ ವಿಶ್ವವಿದ್ಯಾನಿಲಯವು ದೂರಶಿಕ್ಷಣದಲ್ಲಿ ಗುಣಾತ್ಮಕವಾದ ಉನ್ನತ ಶಿಕ್ಷಣವನ್ನು ನೀಡಲು ಮತ್ತು ಅದರ ಗುಣಮಟ್ಟವನ್ನು  ಕಾಯ್ದುಕೊಳ್ಳಲು ಬದ್ಧವಾಗಿರುತ್ತದೆ. ಕರ್ನಾಟಕ ರಾಜ್ಯದ ಮೂಲೆ-ಮೂಲೆಗೂ ಉನ್ನತ ಶಿಕ್ಷಣವನ್ನು ವಿಸ್ತರಿಸುವ ಪ್ರಮುಖವಾದ ಜವಾಬ್ದಾರಿಯನ್ನು ಈ ವಿಶ್ವವಿದ್ಯಾನಿಲಯವು ಹೊಂದಿದೆ. ಪ್ರಸ್ತುತ, ಉನ್ನತ ಶಿಕ್ಷಣವು ರಾಷ್ಟ್ರದ ಅಗತ್ಯತೆಯನ್ನು ಅನುಸರಿಸಿ ವೇಗವಾಗಿ ಸಾಗುತ್ತಿದೆ.  ದೂರಶಿಕ್ಷಣ ಪದ್ಧತಿಯು ತಾತ್ವಿಕ ಮತ್ತು ಸಾಮಾಜಿಕ-ಆರ್ಥಿಕತೆ ಕಾರಣಗಳಿಂದಾಗಿ ಸಮಾಜಕ್ಕೆ ಪ್ರಬಲವಾಗಿ ಅಗತ್ಯವಾಗಿರುವ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಲು ಒಂದು ಪರ್ಯಾಯ ವ್ಯವಸ್ಥೆಯಾಗಿ ಅಸ್ಥಿತ್ವಕ್ಕೆ ಬಂದಿರುತ್ತದೆ.  ಉನ್ನತ ಶಿಕ್ಷಣವು ಸಮಾಜದಲ್ಲಿ ತಿರಸ್ಕøತರಿಗೆ ಮತ್ತು ವಂಚಿತರಿಗೆ ಸಾಮಾಜಿಕ ನ್ಯಾಯವನ್ನು ಹಾಗೂ ಪ್ರಜಾಸತ್ತಾತ್ಮಕವಾಗಿ ಶಿಕ್ಷಣವನ್ನು ಒದಗಿಸುವ ಗುರಿ ಹೊಂದಿರುತ್ತದೆ. 

ಯು.ಜಿ.ಸಿ.ಯ 2017ರ ನಿಯಮಾವಳಿಗಳನ್ವಯ, ಈ ವಿಶ್ವವಿದ್ಯಾನಿಲಯವು 'ಸ್ಕೂಲ್ ಪರಿಕಲ್ಪನೆ' ಯನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ.  ಐದು ಸ್ಕೂಲ್‍ಗಳಿದ್ದು, ಪ್ರತಿಯೊಂದು ಸ್ಕೂಲ್ ನುರಿತ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ  ಮತ್ತು ಬದ್ಧತೆ ಇರುವ ಅಧ್ಯಾಪಕರನ್ನು ಹೊಂದಿರುತ್ತದೆ.  ಜ್ಞಾನಾಧಾರಿತ ಸ್ಪರ್ಧಾತ್ಮಕ ಗುಣವಿರುವ ಮಾನವ ಸಂಪನ್ಮೂಲವನ್ನೊಳಗೊಂಡ ಸಮಾಜವನ್ನು ನಿರ್ಮಿಸಲು ಸಮಕಾಲೀನ ತೀವ್ರತೆಯನ್ನು ಪ್ರಪಂಚವುಅಪೇಕ್ಷಿಸುತ್ತದೆ ಎಂಬುದನ್ನು ವಿಶ್ವವಿದ್ಯಾಲಯವು ಮನಗಂಡಿರುತ್ತದೆ.  ಸದಾ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬದ್ಧವಾಗಿರುವ, ಸಮರ್ಪಕ ವಿದ್ಯಾರ್ಹತೆಯನ್ನು ಹೊಂದಿರುವ ಅಧ್ಯಾಪಕ ವರ್ಗ ಹಾಗೂ ಸಮಾನವಾಗಿ ಸಮರ್ಪಣಾ ಭಾವದ ಶಿಕ್ಷಕೇತರ ವರ್ಗವು ವಿಶ್ವವಿದ್ಯಾನಿಲಯದ ಆಸ್ತಿಯಾಗಿರುತ್ತದೆ.  

ಆಡಳಿತಾತ್ಮಕ ಚಟುವಟಿಕೆಗಳನ್ನು ವಿಕೇಂದ್ರಿಕರಿಸುವ ಮೂಲಕ ವಿದ್ಯಾರ್ಥಿಸ್ನೇಹಿಯನ್ನಾಗಿ ಮಾಡುವ ಸಂಬಂಧವಾಗಿ ವಿಶ್ವವಿದ್ಯಾನಿಲಯವು ಮೂರು ಶ್ರೇಣಿಯ ಪದ್ಧತಿಯನ್ನು ಅನುಸರಿಸುತ್ತಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ, ಮೈಸೂರು, ಇಲ್ಲಿ ಕೇಂದ್ರ ಕಾರ್ಯಸ್ಥಾನವಿದ್ದು, ಕರ್ನಾಟಕದಾದ್ಯಂತ ಪ್ರಾದೇಶಿಕ ಕೇಂದ್ರಗಳು ಹಾಗೂ ಕಲಿಕಾ ಸಹಾಯ ಕೇಂದ್ರಗಳನ್ನು (ಅಧ್ಯಯನ ಕೇಂದ್ರ) ಹೊಂದಿರುತ್ತದೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯವು ಅಧಿಸೂಚಿಸಿರುವ ಅವರ ಆಯ್ಕೆಯ ಪ್ರಾದೇಶಿಕ ಕೇಂದ್ರ/ಕಲಿಕಾ ಸಹಾಯ ಕೇಂದ್ರಗಳಲ್ಲಿ ಬೋಧನಾ-ಕಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹದು.  

ಈ ವಿಶ್ವವಿದ್ಯಾನಿಲಯವು ಗುಣಾತ್ಮಕವಾದ, ಸೃಜನಶೀಲತೆಯುಳ್ಳ, ಅವಿಷ್ಕಾರಸಾಧುವಾದ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಶ್ರೇಷ್ಠ ನಾಗರಿಕರನ್ನಾಗಿ ರೂಪಿಸಿ ಸಾಮಾಜಿಕ ನಡವಳಿಕೆಗಳಲ್ಲಿ ನೈತಿಕತೆಯ ಪ್ರತೀಕಗಳನ್ನಾಗಿ ಪರಿವರ್ತಿಸಲು ಹಾಗೂ ಪರಿಶುದ್ಧ ರಾಷ್ಟ್ರದ ಮತ್ತು ಸಮಾಜದ ಉನ್ನತಿಗೆ ಶ್ರಮಿಸಲು ಪೂರಕವಾಗುವಂತಹ ಸಮಲೋಚನಾ ತರಗತಿಗಳನ್ನು ಹಾಗೂ ವೈಯಕ್ತಿಕ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜ್ಞಾನವನ್ನು ಪ್ರಸರಿಸುವಲ್ಲಿ ಕಾರ್ಯೋನ್ಮುಖವಾಗಿರುತ್ತದೆ. ಇದಲ್ಲದೆ, ಜಾಗತಿಕ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳ ಸೃಜನಾತ್ಮಕ ಮನಸ್ಸುಗಳನ್ನು ಪೋಷಿಸಲು ಸಹಕಾರಿಯಾಗಿದೆ.

ಈ ವಿಶ್ವವಿದ್ಯಾಲಯವು ಬೋಧಿಸುವ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಮಾನ್ಯತೆ ನೀಡಿರುತ್ತದೆ. ಆದ್ದರಿಂದ, ಉದ್ಯೋಗ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲು ಈ ವಿಶ್ವವಿದ್ಯಾಲಯದ ಮೂಲಕ ಪಡೆಯುವ ಪದವಿಗಳಿಗೆ ಮಾನ್ಯತೆಯಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು  ದಿನಾಂಕ 23.02.2018ರ ಸಾರ್ವಜನಿಕ ತಿಳುವಳಿಕೆಯಲ್ಲಿ ದೂರಶಿಕ್ಷಣದ ಮೂಲಕ ಪಡೆಯುವ ಪದವಿ/ಡಿಪ್ಲೋಮಾ/ಸರ್ಟಿಫಿಕೇಟ್ ಕೋರ್ಸುಗಳು ಇತರೆ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಮೂಲಕ ಪಡೆಯುವ ಕಾರ್ಯಕ್ರಮಗಳಿಗೆ ಸಮಾನವಾಗಿರುತ್ತವೆ ಎಂದು ತೀರ್ಮಾನಿಸಿರುತ್ತದೆ. ದೂರಶಿಕ್ಷಣದ ಮೂಲಕ ಪಡೆಯುವ ಪದವಿಗಳು ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ, ಬಹು ರಾಷ್ಟ್ರೀಯ ಕಂಪನಿಗಳು, ಖಾಸಗಿ ವಲಯಗಳು, ಮುಂತಾದ ಸಂಸ್ಥೆಗಳಲ್ಲಿ ಉದ್ಯೋಗ ಮತ್ತು ಬಡ್ತಿ ಪಡೆಯಲು  ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಮಾನ್ಯತೆ ಪಡೆದಿರುತ್ತವೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯು.ಜಿ.ಸಿ.) 2017ರ ದೂರ ಶಿಕ್ಷಣ ಕಲಿಕಾ ನಿಯಮಾವಳಿಗಳನ್ವಯ ಈ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ದೊರಕಿರುತ್ತದೆ. ಆದ್ದರಿಂದ ಈ ವಿಶ್ವವಿದ್ಯಾನಿಲಯಕ್ಕೆ ಕಾನೂನುಬದ್ಧ ಸ್ಥಾನಮಾನ ಲಭ್ಯವಾಗಿದೆ.

ಈ ವಿಶ್ವವಿದ್ಯಾನಿಲಯವು ಒದಗಿಸುವ ಸೇವೆಗಳಿಂದ ನೀವು ಉತ್ತಮ ಕಲಿಕಾ ಅನುಭವವನ್ನು ಪಡೆಯುವ ಮೂಲಕ ಸಂತೋಷಿಸುತ್ತೀರಿ ಎಂಬ ನಂಬಿಕೆ ನನಗಿದೆ. 

ಪ್ರೊ. ಡಿ. ಶಿವಲಿಂಗಯ್ಯ​

         ಕುಲಪತಿ​​